ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವತಿಯಿಂದ 2023-24ನೇ ಸಾಲಿನ ಮೇ ತಿಂಗಳಿನಲ್ಲಿ ಅಂದರೆ ದಿನಾಂಕ:22.05.2023 ರಿಂದ 28.05.2023 ರವರೆಗೆ ಒಟ್ಟು 7 ದಿನಗಳವರೆಗೆ 15 ಜನ ವಿಜ್ಞಾನಿಗಳು ಹಾಗೂ 20 ಜನ ಸಂಶೋಧನಾ ವಿದ್ಯಾರ್ಥಿಗಳನ್ನೊಳಗೊಂಡ ತಂಡವು ಚಿಕ್ಕಮಗಳೂರು (ಎನ್.ಆರ್ ಪುರ, ಕೊಪ್ಪ, ಶೃಂಗೇರಿ ಹಾಗೂ ಕಳಸ) ಮತ್ತು ಶಿವಮೊಗ್ಗ (ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ) ಜಿಲ್ಲೆಗಳಲ್ಲಿ ಎಲೆಚುಕ್ಕೆ ರೋಗದ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಅ ಸಮೀಕ್ಷೆಯಲ್ಲಿ ಕಂಡುಬಂದ ಅಂಶವೆಂದರೆ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಿದ 83 ತೋಟಗಳಲ್ಲಿ ಎಲ್ಲಾ ತೋಟಗಳಲ್ಲಿಯೂ ಎಲೆಚುಕ್ಕೆ ರೋಗದ ಇರುವಿಕೆ ಕಂಡುಬಂದಿದ್ದು ಅವುಗಳು ಶೇಕಡ 10 ರಷ್ಟು ಅಡಿಕೆ ತೋಟಗಳಲ್ಲಿ ತೀವ್ರತರವಾಗಿ (ಶೇ.50ಕ್ಕೂ ಅಧಿಕ) ಭಾದಿತವಾಗಿರುವುದು ಕಂಡುಬಂದಿರುತ್ತದೆ. ಹಾಗೆಯೇ ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 24 ಅಡಿಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು ಶೇಕಡ 40 ರಷ್ಟು ತೋಟಗಳಲ್ಲಿ ಎಲೆಚುಕ್ಕೆ ರೋಗವು ತೀವ್ರತರವಾದ ಹಾನಿಯನ್ನುಂಟು ಮಾಡಿರುವುದು ಕಂಡುಬಂದಿರುತ್ತದೆ. ಇವುಗಳ ಜೊತೆಗೆ ತೀವ್ರಭಾದಿತ ತೋಟಗಳಲ್ಲಿ ಕಾಯಿಚುಕ್ಕೆ ಮತ್ತು ಕಾಯಿ ಸೀಳುವಿಕೆ ರೋಗವೂ ಸಹ ಇರುವುದು ತಿಳಿದುಬಂದಿದೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೈಗೊಂಡ ಸಮೀಕ್ಷೆಯ ಆಧಾರದಲ್ಲಿ ತಿಳಿಯುವುದೇನೆಂದರೆ, ಸಮೀಕ್ಷೆ ನಡೆಸಲಾದ ನಾಲ್ಕು ತಾಲ್ಲೂಕುಗಳ ಪ್ರತಿಯೊಂದು ತೋಟದಲ್ಲಿಯೂ ಸಹ ಎಲೆಚುಕ್ಕೆ ರೋಗ ಕಂಡುಬಂದಿರುತ್ತದೆ. ಸಮೀಕ್ಷೆಯಲ್ಲಿ ಕಂಡುಬಂದ ಪ್ರಮುಖ ಅಂಶವೆಂದರೆ, ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಕಳಸ ತಾಲ್ಲೂಕಿನಲ್ಲಿ ಅತೀ ಹೆಚ್ಚು (ಶೇ.50%), ಶೃಂಗೇರಿ (ಶೇ.20%), ಕೊಪ್ಪ (ಶೇ.25%) ಹಾಗೂ ಎನ್.ಆರ್.ಪುರ (ಶೇ.5%) ರಷ್ಟು ತೋಟಗಳು ರೋಗಪೀಡಿತವಾಗಿರುವುದು ಕಂಡು ಬಂದಿರುತ್ತದೆ. ಸಮೀಕ್ಷೆಯ ವರದಿಯ ಪ್ರಕಾರ ಭೇಟಿ ನೀಡಿದ ಎಲ್ಲಾ ತೋಟಗಳಲ್ಲಿಯೂ ಭಾಧಿತ ಎಲೆಗಳು ಒಣಗಿ ಕೆಳಗೆ ಬಿದ್ದಿರುವುದು ಹಾಗೂ ಒಣಗಿದ ಎಲೆಗಳು ಕಾಂಡಕ್ಕೆ ಜೋತು ಬಿದ್ದಿರುವುದು ಸಹ ಕಂಡು ಬಂದಿರುತ್ತದೆ. ಈಗ ಮಳೆಗಾಲ ಮತ್ತೆ ಪ್ರಾರಂಭವಾಗುತ್ತಿದ್ದು ಈ ರೋಗ ಮತ್ತೆ ಮುನ್ನೆಲೆಗೆ ಬಂದು ಕಳೆದ ವರ್ಷದಂತೆ ಈ ವರ್ಷವೂ ಸಹ ಹೆಚ್ಚಿನ ಭಾಧೆಯನ್ನು ಉಂಟುಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಹಾಗಾಗಿ ಅಡಿಕೆ ಬೆಳೆಗಾರರು ಕೆಳಗೆ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ಕೂಡಲೇ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅಡಿಕೆ ತೋಟದಲ್ಲಿನ ರೋಗಭಾದಿತ ಒಣಗಿದ ಮತ್ತು ಕೆಳಗೆ ಬಿದ್ದಿರುವ ಸೋಗೆಗಳನ್ನು ತೆಗೆದು ಸುಡುವುದು. ಅಡಿಕೆ ಸಸಿಗಳನ್ನು ಹೊಸದಾಗಿ ನಾಟಿ ಮಾಡುವುದಾದಲ್ಲಿ ರೋಗ ರಹಿತ ಸಸಿಗಳನ್ನು ಆರಿಸಿ ನಾಟಿ ಮಾಡುವುದು. ಮುಂಗಾರು ಪ್ರಾರಂಭದಲ್ಲಿ ಶೇ.1ರ ಬೋರ್ಡೋ ಮಿಶ್ರಣ ಸಿಂಪರಣೆ ಮಾಡುವಾಗ ಹಿಂಗಾರಗಳ ಜೊತೆಗೆ ಎಲ್ಲಾ ಎಲೆಗಳಿಗೂ ಔಷಧಿ ಸಿಂಪರಣೆಯಾಗುವಂತೆ ನೋಡಿಕೊಳ್ಳಬೇಕು. ಹೆಚ್ಚು ಭಾದೆಯಿರುವ ತೋಟಗಳಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ಮಳೆ ಇಲ್ಲದಾಗ ಪ್ರೋಪಿಕೋನಝೋಲ್ (Pಡಿoಠಿiಛಿoಟಿಚಿzoಟe 25ಇಅ) ಶಿಲೀಂದ್ರನಾಶಕವನ್ನು 1 ಲೀಟರ್ ನೀರಿಗೆ 1 ಮಿಲಿ ಲೀಟರ್ ಪ್ರಮಾಣದಂತೆ ಎಲೆಗಳಿಗೆ ಸಿಂಪರಣೆ ಮಾಡಬೇಕು. ಮಳೆ ಮುಂದುವರಿದು ರೋಗ ಭಾದೆ ಕಡಿಮೆಯಾಗದಿದ್ದಲ್ಲಿ 20-25 ದಿನಗಳ ನಂತರ ಎರಡನೇ ಸಿಂಪರಣೆಯಾಗಿ ಅಂತರ್‍ವ್ಯಾಪಿ ಶಿಲೀಂದ್ರನಾಶಕಗಳಾದ ಹೆಕ್ಸಾಕೋನಝೋಲ್ (ಊexಚಿಛಿoಟಿಚಿzoಟe 5%ಇಅ ಅಥವಾ 5Sಅ) ಅಥವಾ ಟೆಬುಕೊನಝೋಲ್ (ಖಿebuಛಿoಟಿಚಿzoಟe 38.9ಇಅ) ಶಿಲೀಂದ್ರನಾಶಕವನ್ನು 1 ಲೀಟರ್ ನೀರಿಗೆ 1 ಮಿಲಿ ಲೀಟರ್ ಜೊತೆಗೆ 1 ಮಿಲಿ ಅಂಟು ಅಥವಾ ರಾಳವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತೀ ಮರಗಳಿಗೆ ಮಣ್ಣು ಪರೀಕ್ಷೆ ಆಧಾರದ ಮೇಲೆ ಕೃಷಿ ಸುಣ್ಣ ಅಥವ ಡೊಲೋಮೈಟ್ (250-500ಗ್ರಾಂ) ನೀಡುವುದು ಉತ್ತಮ. ಅಡಿಕೆ ಮರಕ್ಕೆ 12 ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ, ಯೂರಿಯಾ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ) ಮತ್ತು ಪೊಟ್ಯಾಷ್ (240-350 ಗ್ರಾಂ) ನೀಡಬೇಕು. ಮೇಲೆ ಸೂಚಿಸಿದ ರಸಗೊಬ್ಬರಗಳನ್ನು ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್ (10-15 ಗ್ರಾಂ) ಮತ್ತು ಬೊರಾಕ್ಸ್ (5-10 ಗ್ರಾಂ) ಕೂಡ ನೀಡಬಹುದು. ಎಲೆಚುಕ್ಕೆ ರೋಗಾಣು ಗಾಳಿಯ ಮುಖಾಂತರ ಬಹಳ ಬೇಗನೆ ಹರಡುತ್ತದೆ. ಹಾಗಾಗಿ ಸಮುದಾಯ ಮಟ್ಟದಲ್ಲಿ ನಿರ್ವಹಣಾ ಕ್ರಮಗಳನ್ನು ಅನುಸರಿಸಿದಲ್ಲಿ ಮಾತ್ರ ಈ ರೋಗವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಡಾ. ಬಿ. ಗಂಗಾಧರ ನಾಯ್ಕ, ಮುಖ್ಯಸ್ಥರು ಸಸ್ಯರೋಗಶಾಸ್ತ್ರ ವಿಭಾಗ ಮತ್ತು ಅಧ್ಯಕ್ಷರು, ಅಡಿಕೆ ಕಾರ್ಯಪಡೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!