ಶಿವಮೊಗ್ಗ, ಜನವರಿ 19 : ತಾವು ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಂಘಟಿತರಾಗಿ ಬದ್ದತೆಯಿಂದ, ದೃಢವಿಶ್ವಾಸದಿಂದ ಕಾರ್ಯನಿರ್ವಹಿಸಿದಲ್ಲಿ ಸಫಲತೆ ಕಾಣಬಹುದಾಗಿದೆ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಅವರು ಹೇಳಿದರು.
ಅವರು ಇಂದು ರಾಜ್ಯ ಸರ್ಕಾರಿ ನೌಕರರ ಸಂಘವು ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ಅಧಿಕಾರಿ-ನೌಕರರಿಗಾಗಿ ಏರ್ಪಡಿಸಲಾಗಿದ್ದ ಚರ್ಚೆ, ಸಂವಾದ, ಉಪನ್ಯಾಸ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವುದೇ ವ್ಯಕ್ತಿ ತಮ್ಮ ಕಾರ್ಯದಲ್ಲಿ ಬದ್ದತೆ, ದೃಢತೆ ಇರಬೇಕು. ತಾವು ನಿರ್ವಹಿಸುವ ಕಾರ್ಯಕ್ಷೇತ್ರದ ವ್ಯಾಪ್ತಿ, ಜವಾಬ್ದಾರಿ, ನಿಯಮ, ಅದರ ವ್ಯವಸ್ಥಿತ ಅನುಷ್ಠಾನಗಳ ಬಗ್ಗೆ ಅರಿತಿರಬೇಕು ಎಂದವರು ನುಡಿದರು.
ನೌಕರ ತಾವು ನಿರ್ವಹಿಸುವ ಕೆಲಸವನ್ನು ಅರ್ಥ ಮಾಡಿಕೊಂಡು ನಿರ್ವಹಿಸಿ ದಕ್ಷತೆ ಮೆರೆಯಬೇಕು. ಏಕಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ಸಿಬ್ಬಂಧಿಗಳು ಕೂಡ ಸಂಘಟಿತರಾಗಿ ಕಾಲಮಿತಿಯಲ್ಲಿ, ಸ್ಥಳೀಯವಾಗಿ ದೊರೆಯಬಹುದಾದ ಸಂಪನ್ಮೂಲವನ್ನು ಬಳಸಿಕೊಂಡು ಪ್ರಾಮಾಣಕತೆಯಿಂದ ಕಾರ್ಯನಿರ್ವಹಿಸಬೇಕು. ಇದರಿಂದಾಗಿ ನಿರೀಕ್ಷಿತ ಕೆಲಸ ನಿರ್ವಹಿಸಬಹುದಾಗಿದೆ ಮಾತ್ರವಲ್ಲ ಸಹಜವಾಗಿ ನೌಕರ ಯಾವುದೇ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿ ಉತ್ತಮ ಹೆಸರು ಪಡೆಯುತ್ತಾನೆ ಎಂದವರು ನುಡಿದರು.
ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಾಗೂ ರಾಜಕೀಯ ವ್ಯವಸ್ಥೆಯ ಸಹಕಾರಯುತ ವಾತಾವರಣ ಇರಬೇಕು ಎಂದವರು ನುಡಿದರು.
ಈ ಕಾರ್ಯಾಗಾರದಲ್ಲಿ ಕೆ.ಜೈರಾಜ್ ವಿರಚಿತ ರಾಜಮಾರ್ಗವನ್ನು ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಹೃದಯ ಓದುಗರ ಸಂಖ್ಯೆ ಕಡಿಮೆಯಾಗಿರುವುದು ವಿಷಾಧದ ಸಂಗತಿ ಎಂದ ಅವರು ಓದುಗರಿಲ್ಲದೆ ಎಂತಹ ಪುಸ್ತಕಗಳಿಗೂ ಮೌಲ್ಯವಿರುವುದಿಲ್ಲ ಎಂದರು.
ಕೆ.ಜೈರಾಜ್ ಅವರು ವಿರಚಿತ ರಾಜಮಾರ್ಗ ಕೃತಿಯಲ್ಲಿ ಜೈರಾಜ್ ಅವರು ಸುದೀರ್ಘ 35ವರ್ಷಗಳ ಸೇವಾವಧಿಯಲ್ಲಿ ತಾವು ಕಂಡುಂಡ ಅನುಭವಗಳ ಸಾರವನ್ನು ದಾಖಲಿಸಲಾಗಿದೆ. ಅರ್ಥಪೂರ್ಣ ಕೃತಿಗಳನ್ನು ಓದಲು ಸಮಯದ ಕೊರತೆ ಇದೆ ಎಂದು ಹೇಳುವುದು ನೆಪವಾಗಿದ್ದು, ಓದುಗರು ತಮ್ಮ ಕರ್ತವ್ಯದೊಂದಿಗೆ ಓದಿಗೂ ಅಲ್ಪ ಸಮಯ ಮೀಸಲಿಡಬೇಕು ಎಂದವರು ನುಡಿದರು.
ರಾಜಮಾರ್ಗದಲ್ಲಿ ಅಮೂಲ್ಯ ಮಾಹಿತಿಯುಕ್ತ ಸಂದೇಶಗಳಿವೆ. ಈ ಕೃತಿಯಲ್ಲಿ ಆಡಳಿತಾತ್ಮಕ ಅನುಭವಗಳನ್ನು ಲೇಖಕರು ದಾಖಲಿಸಿದ್ದಾರೆ. ನೌಕರರು ಕರ್ತವ್ಯ ನಿರ್ವಹಿಸುವಲ್ಲಿ ಎದುರಾಗುವ ಸಮಸ್ಯೆ, ಸವಾಲು, ಅಹವಾಲು, ಸಹಕಾರಗಳ ಕುರಿತು ಕೃತಿಯಿಂದ ತಿಳಿಯಬಹುದಾಗಿದೆ ಅಲ್ಲದೆ ಕೃತಿ ಓದುಗರೆಲ್ಲರೂ ಇದರ ಲಾಭ ಪಡೆದು ತಮ್ಮ ಕಾರ್ಯಕ್ಷೇತ್ರದಲ್ಲಿ ದಕ್ಷತೆಯನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಸಾಮಾಜಿಕ ಬದುಕಿನಲ್ಲಿ ಮೌಲ್ಯಗಳ ಅಧಃಪತನವಾಗುತ್ತಿದೆ. ಪ್ರಾಮಾಣಿಕತೆ, ಬದ್ಧತೆ ಕಾಣೆಯಾಗಿದೆ. ನೌಕರರು ತಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿಯರಿತು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪೊಲೀಸ್ ಉಪಾಧೀಕ್ಷಕ ಕುಣಿಗಲ್ ಶ್ರೀಕಂಠ ಅವರು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಎಸಿಬಿ.ಪೊಲೀಸ್ ಉಪಾಧೀಕ್ಷಕ ಎಲ್.ವೇಣುಗೋಪಾಲ್, ಲೋಕಾಯುಕ್ತ ಉಪಾಧೀಕ್ಷಕ ಕೆ.ಸಿ.ಪುರುಷೋತ್ತಮ್, ಎಸ್.ವೈ.ರಮೇಶ್, ಡಿ.ಟಿ.ಕೃಷ್ಣಮೂರ್ತಿ, ಐ.ಪಿ.ಶಾಂತರಾಜ್, ಹೆಚ್.ಎನ್.ರಾಘು, ಬ್ರಿಜೆಟ್ ವರ್ಗೀಸ್ ಮುಂತಾದವರು ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ.

error: Content is protected !!