ಶಿವಮೊಗ್ಗ :ಜಿಲ್ಲೆಯ ಹೊಸನಗರ ತಾಲ್ಲೂಕಿನ ಪೌರಾಣಿಕ ಹಿನ್ನೆಲೆಯುಳ್ಳ ಸ್ಥಳಗಳಲ್ಲಿ ಒಂದಾದ ಗುಬ್ಬಿಗ ಗ್ರಾಮದ ಗುಳುಗುಳಿ ಶಂಕರೇಶ್ವರ ದೇವಾಲಯ ಕೂಡಾ ಒಂದು.

ಪೌರಾಣಿಕ ಹಿನ್ನಲೆಯ ಪ್ರಕಾರ ಶಿವಪಾರ್ವತಿಯರು ಭೂಸಂಚಾರ ಮಾಡುತ್ತಾ ಬಂದಾಗ ಈ ಸ್ಥಳದಲ್ಲಿ ನೀರಿನ ಅಭಾವವನ್ನು ಮನಗಂಡು ಗಂಗೆಯನ್ನು ಆಹ್ವಾನಿಸಿ ಕೊಳವನ್ನು ನಿರ್ಮಿಸಿದರು. ಗಂಗೆಯ ಕೋರಿಕೆಯಂತೆ ಶಿವನು ಇಲ್ಲಿ ನೆಲೆಸಿದನು ಎಂದು ಪ್ರತೀತಿ ಇದೆ. ಚಪ್ಪಾಳೆ ತಟ್ಟಿದಾಗ ಈ ಕೊಳದಲ್ಲಿ ಗುಳ್ಳೆಗಳು ಬರುವುದರಿಂದ ಈ ಸ್ಥಳಕ್ಕೆ ಗುಳುಗುಳಿ ಶಂಕರ ಎನ್ನುತ್ತಾರೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಹೊಂಡ ಮುಂಜಾನೆ ಹಾಗೂ ಮುಸ್ಸಂಜೆಯ ವೇಳೆಯಲ್ಲಿ ಸೂರ್ಯನ ಕಿರಣಗಳು ಬೀಳುವುದರಿಂದ ಬಂಗಾರದ ಹೊಳಪು ಪಡೆಯುತ್ತದೆ.ಈ ನೋಟ ಎಂಥವರನ್ನೂ ಬೆರಗು ಗೊಳಿಸುತ್ತದೆ. ಈ ನೀರು ಸದಾಕಾಲ ಉಕ್ಕಿ ಹರಿಯುತ್ತಲೇ ಇರುತ್ತದೆ.ಸಾಮಾನ್ಯವಾಗಿ ಈ ನೀರಿನಲ್ಲಿ ಶಿವನಿಗೆ ಪ್ರೀಯವಾದ ಬಿಲ್ವಪತ್ರೆ ಎಲೆಗಳನ್ನು ಹಾಕಿದಾಗ ಭಕ್ತಿಗನುಗುಣವಾಗಿ ಅವು ತೇಲುತ್ತವೆ ಎಂಬುದು ಭಕ್ತರ ನಂಬಿಕೆ.

ಈ ಹೊಂಡಕ್ಕೆ ಬೇರೆ ಯಾವ ಬಾಹ್ಯ ನೀರಿನ ಮೂಲಗಳಿಲ್ಲ. ಆದರೂ ಇದರಲ್ಲಿನ ನೀರು ಕಡು ಬೇಸಿಗೆಯಲ್ಲಿಯೂ ಸದಾ ಉಕ್ಕಿ ಹರಿಯುತ್ತದೆ. ಇದಕ್ಕೆ ಕಾರಣ ಈ ಹೊಂಡದ ತಳದಲ್ಲಿರುವ ಆನೀರಿನ ಅಗಾಧ ಚಿಲುಮೆ. ಇದು ಸದಾ ನೀರನ್ನು ರಭಸದಿಂದ ಹೊರದಬ್ಬುತ್ತಿರುತ್ತದೆ. ಹಾಗಾಗಿ ನೀರಿನ ಗುಳ್ಳೆಗಳು ಹೊಂಡದಿಂದ ಜಿನುಗುತ್ತಿರುತ್ತದೆ. ನೀರಿನಲ್ಲಿ ಹೀಗೆ ಜಿನುಗುವ ಗುಳ್ಳೆಗಳಿಂದಾಗಿಯೇ ಇದಕ್ಕೆ ಗುಳಿಗುಳಿ ಶಂಕರ ಎಂಬ ಹೆಸರು ಬಂದಿದೆ.

ಇನ್ನೂ ಈ ಹೊಂಡದಲ್ಲಿರುವ ಪಾಚಿ ಹಾಗೂ ಇತರೆ ಸಸ್ಯಗಳು ಹರಡದೆ ಕಂಬಗಳಂತೆ ನೇರವಾಗಿ ಎದ್ದು ನಿಂತಿರುವುದನ್ನು ಗಮನಿಸಬಹುದು. ಇದಕ್ಕೆ ಕಾರಣ ನೀರಿನಲ್ಲಿರುವ  ಒತ್ತಡ. ಅಲ್ಲದೆ ಇವು ಬಂಗಾರದ ಬಣ್ಣವನ್ನು ಹೊಂದಿವೆ. ಆ ಕಾರಣದಿಂದಲೇ ಹೊಂಡವು ಬಂಗಾರದ ಬಣ್ಣದಿಂದ ಕಂಗೊಳಿಸುತ್ತದೆ. 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಬ್ಬಿಗ ಗ್ರಾಮದ ವ್ಯಾಪ್ತಿಯಲ್ಲಿ ಕಂಡುಬರುವ ಈ ಗುಳಿಗುಳಿ ಶಂಕರ ಹೊಂಡವು ಹೊಸನಗರ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿದೆ. 

                              

error: Content is protected !!