“ಮಹಾತ್ಮಾ ಗಾಂಧಿಯವರ ಕನಸಿನ ಕೂಸಾದ ರಾಷ್ಟ್ರೀಯ ಸೇವಾ ಯೋಜನೆಯು ಯುವಜನರ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಗ್ರಾಮಗಳ ಉದ್ಧಾರಕ್ಕೆ ಪೂರಕವಾಗಿದೆ” ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಸಿ.ವೀರಣ್ಣನವರು ಅಭಿಪ್ರಾಯ ಪಟ್ಟರು. ತುಪ್ಪೂರು ಪಂಚಾಯತಿ ವ್ಯಾಪ್ತಿಯ ಕೊರಗಿ ಗ್ರಾಮದಲ್ಲಿ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯವು ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಗ್ರಾಮೀಣ ಪರಿಸರದಲ್ಲಿದ್ದು ಅಲ್ಲಿನ ಜನಜೀವನವನ್ನು ಅರಿತು ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು. ತುಪ್ಪೂರು ಗ್ರಾಮಪಂಚಾಯತಿ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ರಾಷ್ಟ್ರೀಯ ಸೇವಾ ಯೋಜನೆಯಿಂದಾಗಿ ತಮ್ಮಲ್ಲಿ ನಾಯಕತ್ವದ ಗುಣ ತುಂಬಿ, ಸೇವಾ ಮನೋಭಾವ ಬೆಳೆಯಿತೆಂದು ನುಡಿದರು. ಮಹಾವಿದ್ಯಾಲಯದ ಡೀನ್ ರವರಾದ ಪ್ರೊ.ಪ್ರಕಾಶ್ ನಡೂರ್ ರವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿಶ್ಲೇಶಿಸಿ ಒಂದು ವಾರ ಕಾಲದ ಈ ಶಿಬಿರದಲ್ಲಿ, ಸಾರ್ವಜನಿಕ ಆರೋಗ್ಯ, ಕೃಷಿ-ಪಶುಸಂಗೋಪನೆಗೆ ಸಂಬಂಧಿಸಿದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಗ್ರಾಮಸ್ಥರೆಲ್ಲರೂ ಹೆಚ್ಚು ಆಸಕ್ತಿಯಿಂದ ಶಿಬಿರದ ಎಲ್ಲಾ ಕಾರ್ಯಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಗೀತಾ ಈಶ್ವರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಸುರೇಶ್, ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಾನಸಾ ರಮೇಶ್, ಶಿಕ್ಷಕರಾದ ಶ್ರೀ ಹರೀಷ್ ಹಾಜರಿದ್ದರು.
ಏಳು ದಿನಗಳ ಕಾಲ ನಡೆಯಲಿರುವ ಶಿಬಿರದಲ್ಲಿ ಆಯುರ್ವೇದ ಚಿಕಿತ್ಸಾ ಶಿಬಿರ, ದಂತ ಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಬರಡು ರಾಸು ಚಿಕಿತ್ಸಾಶಿಬಿರ, ಕೃಷಿ ಹಾಗೂ ಪಶುಸಂಗೋಪನೆಯ ವಿವಿಧ ಪ್ರಾತ್ಯಕ್ಷತೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರಾಧಿಕಾರಿಗಳಾದ ಡಾ.ರವಿಕುಮಾರ್, ಡಾ.ಯೋಗೇಶ್, ಡಾ.ಪ್ರಶಾಂತ್, ಡಾ.ಚೇತನ್ ಶರ್ಮ ಮತ್ತು ಡಾ.ನಾಗರಾಜ್ ಸಂಯೋಜಿಸಿರುವ ಶಿಬಿರದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
