ಮಲೆನಾಡಿನ ವಾಣಿಜ್ಯ ಬೆಳೆಯಾದ ಅಡಿಕೆಯಲ್ಲಿ ಅಡಿಕೆಯಲ್ಲಿನ ಸಮಸ್ಯೆಗಳಾದ ರೋಗ , ಕೀಟಬಾಧೆ ಹಾಗೂ ಪೋಷಕಾಂಶಗಳ ಕೊರತೆಗಳ ಕುರಿತು ರೈತರ ಸಮಸ್ಯೆ ಗಳಿಗೆ ಪರಿಹಾರೋಪಾಯಗಳನ್ನು ನೀಡುವ ಸಲುವಾಗಿ ಕೃಷಿ ವಿವಿ ಇರುವಕ್ಕಿಯ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರು ಗ್ರಾಮದಲ್ಲಿ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಯಾವುದೇ ಭಾಷಣವಿಲ್ಲದೆ, ಅಡಿಕೆ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವನ್ನು ಮಾಡಿಕೊಡುವುದು ಹಾಗೂ ಸಮಸ್ಯೆಯನ್ನು ಆಲಿಸಿ, ಪರಿಹಾರೋಪಾಯಗಳನ್ನು ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಮಲೆನಾಡಿನಲ್ಲಿ ಕೊಳೆರೋಗವು ಹೆಚ್ಚಾಗುತ್ತಿದ್ದು, ನಿಯಂತ್ರಣ ಮಾಡುವುದು ಹೇಗೆ ಎಂಬ ರೈತರಾದ ಶ್ರೀನಿವಾಸರ ಭಟ್ಟರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಪನ್ಮೂಲ ವ್ಯಕ್ತಿಗಳಾದ ಡಾ. ನರಸಿಂಹಮೂರ್ತಿಯವರು “ಕೊಳೆರೋಗ ರೋಗವು ಫೈಟೊಫ್ಥೋರಾ ಅರೆಕೇ ಎಂಬ ಶಿಲೀಂಧ್ರದಿಂದ ಬರುತ್ತದೆ. ಈ ಶಿಲೀಂಧ್ರಕ್ಕೆ ಸೂಕ್ತ ವಾತಾವರಣ ಮತ್ತು ಸೂಕ್ತ ಬೆಳೆ ಸಿಕ್ಕಾಗ ಹರಡುತ್ತದೆ .ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ.ಮೊದಲು ಅಡಿಕೆಯ ತುದಿಯ ಭಾಗದಲ್ಲಿ ನೀರಿನ ಗುಳ್ಳೆ ಗಳು ಕಾಣುತ್ತವೆ. ನಂತರದಲ್ಲಿ
ಕಂದು ಚುಕ್ಕೆಗಳಾಗಿ, ಕಾಯಿಗಳು ಉದುರಲು ಶುರುವಾಗುತ್ತದೆ. ಕೆಳಗೆ ಬಿದ್ದ ಕಾಯಿಗಳ ಮೇಲೆ ಬೂಸ್ಟ್ ರೀತಿಯಲ್ಲಿ ಶಿಲೀಂಧ್ರವು ಬೆಳೆಯುತ್ತದೆ ಎಂದು ರೋಗದ ಲಕ್ಷಣಗಳನ್ನು ವಿವರಿಸಿದರು.. ರೋಗ ಬಂದಿರುವ ಕಾಯಿಗಳನ್ನು, ಗರಿಗಳನ್ನು ತೆಗೆದು ಸುಡಬೇಕು. ಮುಂಗಾರು ಮಳೆ ಮುಂಚಿತವಾಗಿ ಶೇಕಡಾ 1 ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು. 30 ದಿನಗಳ ನಂತರ ಪುನಃ ಶೇಕಡ ಒಂದು ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು ಸೂಕ್ತ “ಎಂದು ನಿರ್ವಹಣೆಯ ಬಗ್ಗೆ ತಿಳಿಸಿದರು.

ಅಡಿಕೆಯಲ್ಲಿ ಬರುವ ಮುಖ್ಯ ರೋಗವಾದ ಎಲೆ ಚುಕ್ಕೆ ರೋಗದ ಬಗ್ಗೆ ಮಾತನಾಡಿ ,”ಈ ರೋಗವು ಕೊಲೆಟೋಟ್ರಿಕಮ್ ಮತ್ತು ಫಿಲೋಸ್ಟಿಕ್ಟಾ ಎಂಬ ಶಿಲೀಂಧ್ರಗಳಿಂದ ಬರುತ್ತದೆ . ಮೊದಲು ಹಳದಿ ಬಣ್ಣ ಮಧ್ಯದಲ್ಲಿ ಕಂದು ಬಣ್ಣ ಇರುವ ಚುಕ್ಕೆಗಳು ಕಂಡುಬರುತ್ತದೆ .ಇದು ಕ್ರಮೇಣವಾಗಿ ಕಾಯಿಗಳಿಗೂ ಹರಡಿ, ಕಾಯಿಯ ಗುಣಮಟ್ಟ ಕಡಿಮೆ ಮಾಡುತ್ತದೆ .ಈ ರೋಗವನ್ನು ಕ್ಷೇತ್ರ ಸ್ವಚ್ಛತೆ ಹಾಗೂ ಹುಲ್ಲು ,ಕಳೆ ತೆಗೆದು ಹಾಕುವುದು. ಹಾಗೂ ಮಣ್ಣಿನ ಪರೀಕ್ಷೆ ಮಾಡಿ ಪೋಷಕಾಂಶಗಳನ್ನು ಕೊಡುವುದು ಬಹಳ ಸೂಕ್ತವಾಗಿದೆ.ಹೆಕ್ಸಾಕೊನಜೋಲ್ 2 ಮಿ.ಲೀ ಅನ್ನು 1 ಲೀ ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಿಸಿ ನಿರ್ವಹಣೆ ಮಾಡಬಹುದು” ಎಂದು ತಿಳಿಸಿದರು.

ಬೇರುಹುಳುವಿನ ಬಾಧೆಯ ಬಗ್ಗೆ ಮಾತನಾಡಿದ ಡಾ.ನವೀನ್
“ಬೇರುಹುಳುಗಳು ಮಣ್ಣಿನ ತೇವಾಂಶ ಹೆಚ್ಚಿದರೆ ಮೇಲ್ಭಾಗದಲ್ಲಿ ಹಾಗೂ ತೇವಾಂಶ ಕಡಿಮೆಯಿದ್ದರೆ ಮಣ್ಣಿನ ಆಳದಲ್ಲಿರುತ್ತವೆ, ಮಣ್ಣಿನ್ನು ಅಗೆದು ಸಡಿಲಗೊಳಿಸಿ ಬೇರುಹುಳುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು. ಮೆಟಾರೈಜಿಯಮ್ ಅನಿಸೊಪ್ಲಿಯೆ ಪ್ರತಿ ಗಿಡಕ್ಕೆ ಹಾಕುವುದರಿಂದ ಬೇರುಹುಳುಗಳಿಗೆ ರೋಗ ಬಂದು ಸಾಯುತ್ತವೆ. ಮೊಹಕ ಬಲೆಯನ್ನು ಬಲಸಿ ದುಂಬಿಯನ್ನು ನಾಶಪಡುಸಬೇಕು.ಕ್ಲೋರ್ಪೈರಿಫಾಸ್ 3 ಮಿ.ಲೀ ಅನ್ನು 1 ಲೀ ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಣೆ ಮಾಡುವುದರಿಂದ ನಿರ್ವಹಣೆ ಮಾಡಬಹುದು” ಎಂದರು.

ಎಳಗಲ್ಲು ಗ್ರಾಮದ ರೈತರಾದ ಬಂಗಾರಪ್ಪ ಅವರು ತಮ್ಮ ತೋಟದಲ್ಲಿ ಹಿಡಿಮುಂಡಿಗೆ ರೋಗವು ಹೆಚ್ಚಾಗಿದ್ದು ಇಳುವರಿ ಕುಂಠಿತಗೊಂಡಿದೆ ಎಂಬ ಸಮಸ್ಯೆಗೆ ಉತ್ತರಿಸಿದ ಅಡಿಕೆ ಸಂಶೋಧನಾ ಕೇಂದ್ರದ ತಜ್ಞರಾದ ಡಾ.ಸ್ವಾತಿ ಅವರು ಮಾತನಾಡಿ “ಭತ್ತದ ಗದ್ದೆಯನ್ನು ಅಡಿಕೆ ತೋಟವನ್ನಾಗಿ ಪರಿವರ್ತಿಸಿದ ಜಾಗದಲ್ಲಿ ಹಿಡಿಮುಂಡಿಗೆ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ ಬೇರೆ ಮುಣ್ಣನ್ನು ತಂದು ಹಾಕುವುದರಿಂದ, ಜಿಂಕ್ ಹಾಗೂ ಬೊರಾನ್ ಪೋಷಕಾಂಶಗಳ ಕೊರತೆ ಇರುವ ತೋಟದಲ್ಲಿ ಹಿಡಿಮುಂದಿಗೆ ರೋಗ ಹೆಚ್ಚಾಗಿ ಕಂಡುಬರುತ್ತದೆ ಎಂದು ಕಾರಣಗಳನ್ನು ತಿಳಿಸಿದರು. ಎಲೆಗಳು ಚಿಕ್ಕದಾಗಿದ್ದು, ಗೆಣ್ಣುಗಳ ಅಂತರ ಕಡಿಮೆಯಾಗುತ್ತದೆ. ಮರವು ಅಡಿಕೆಯನ್ನು ಬಿಡಲು ವಿಫಲವಾಗುತ್ತದೆ ಎಂದು ರೋಗದ ಲಕ್ಷಣಗಳನ್ನು ತಿಳಿಸಿದರು. ಹಿಡಿ ಮುಂಡಿಗೆಯನ್ನು, ಎರಡು ಗಿಡಗಳ ಮಧ್ಯೆ ಎರಡು ಅಡಿ ಆಳದ ಬಸಿಗಾಲಿಗೆಗಳನ್ನು ಮಾಡಬೇಕು ಹಾಗೂ ಅದನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ನೀರು ಗಿಡಗಳಿಗೆ ಅವಶ್ಯಕತೆಗಳಿಗುಣವಾಗಿ ನೀಡಬೇಕು ಹಾಗೂ ಮಣ್ಣಿಗೆ ಕಾಪರ್ ಸಲ್ಪೇಟ್ ಮತ್ತು ಸುಣ್ಣವನ್ನು ಹಾಕುವುದರ ಮೂಲಕ ನಿರ್ವಹಣೆ ಮಾಡಬಹುದು. ಜೊತೆಗೆ ಟ್ರೈಕೋಡರ್ಮ ಜೈವಿಕ ಗೊಬ್ಬರವನ್ನು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಹಾಕಬೇಕು” ಎಂದು ಸಲಹೆ ನೀಡಿದರು .

ಹೆಚ್ಚು ಇಳುವರಿ ನೀಡುವ ಅಡಿಕೆ ತಳಿಗಳನ್ನು ಬಳಸುವುದು ರೈತರಿಗೆ ಲಾಭದಾಯಕವೇ? ಎಂಬ ಎಂಬ ರೈತರಾದ ಸುಧೀರ್ ಅವರಿಗೆ ಉತ್ತರಿಸಿದ ಡಾ. ಸ್ವಾತಿ ಅವರು” ಮಲೆನಾಡಿನ ಭಾಗಕ್ಕೆ ಯಾವ ತಳಿಯು ಸೂಕ್ತವೋ, ಅದೇ ತಳಿಯನ್ನು ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು. ಬೇರೆ ಭಾಗದಲ್ಲಿ ಒಂದು ತಳಿ ಹೆಚ್ಚು ಇಳುವರಿ ಕೊಡುವುದನ್ನು ಕಂಡು ಅದೇ ತಳಿಯನ್ನು ನಾವು ಈ ಭಾಗಕ್ಕೆ ಹಾಕಿದರೆ ಅದು ಹೆಚ್ಚು ಇಳುವರಿ ನೀಡುವುದಿಲ್ಲ ಹಾಗೂ ಸಸಿಗಳನ್ನು ಬೇರೆ ಕಡೆಯಿಂದ ತಂದು ನಾಟಿ ಮಾಡುವುದಕ್ಕಿಂತ 20ರಿಂದ 30 ವರ್ಷದ ಹಳೆಯ ತೋಟದಲ್ಲಿರುವ ಹತ್ತರಿಂದ ಹದಿನೈದು ಗರಿಗಳನ್ನು ಬಿಟ್ಟ ಮರವನ್ನು ಆಯ್ಕೆ ಮಾಡಿಕೊಂಡು 35 ಗ್ರಾಂ ಗೋಟಿನಿಂದ ಸಸಿಗಳನ್ನು ಬೆಳೆದು ನಾಟಿ ಮಾಡಿದರೆ ಸೂಕ್ತ ಎಂದು ಹೇಳಿದರು..

“ಇಳಿವರಿಯು ಹೆಚ್ಚು ಆಗಬೇಕು ಎಂಬ ಕಾರಣಕ್ಕೆ ರಾಸಾಯನಿಕ ಗೊಬ್ಬರಗಳನ್ನು ಯಥೇಚ್ಛವಾಗಿ ಬಳಸುವುದರಿಂದ ಭೂಮಿಯಲ್ಲಿರುವ ಜೀವಾಣುಗಳು ಸತ್ತು ಹೋಗುತ್ತವೆ. ಜೊತೆಗೆ ಭೂಮಿಯ ಫಲವತ್ತತೆ ಕಡಿಮೆಯಾಗಿ, ಗಿಡಗಳು ಪೋಷಕಾಂಶಗಳು ದೊರೆಯದೆ ಸಾವಿಗೀಡಾಗುತ್ತಿವೆ”ಆದುದರಿಂದ ಕೊಟ್ಟಿಗೆ ಗೊಬ್ಬರ ಹಾಗೂ ಜೈವಿಕ ಗೊಬ್ಬರ ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು..

ಗುಂಡಿಯನ್ನು ತೆಗೆದು ಗೊಬ್ಬರಗವನ್ನು ತಯಾರಿಸುವುದರಿಂದ, ಮಳೆಗಾಲದಲ್ಲಿ ಗುಂಡಿಯಲ್ಲಿ ನೀರು ನಿಂತು ಪೋಷಕಾಂಶಗಳು ನಷ್ಟವಾಗುತ್ತದೆ. ಆದುದರಿಂದ ಗುಂಡಿಯನ್ನು ತೆಗೆಯದೆ ನೆಲದ ಮೇಲೆ ಗೊಬ್ಬರ ತಯಾರಿಕೆ ಮಾಡುವುದು ಸೂಕ್ತ ಎಂದು ರೈತರೊಂದಿಗೆ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ವಿವಿಯ ವಿಜ್ಞಾನಿಗಳಾದ ಡಾ.ಶಶಿಕಲಾ ,ಡಾ. ಕಿರಣ್ ,ಡಾ.ನವೀನ್ ,ಡಾ.ನರಸಿಂಹಮೂರ್ತಿ , ಅಡಿಕೆ ಸಂಶೋಧನಾ ಕೇಂದ್ರದ ತಜ್ಞರಾದ ಡಾ.ಸ್ವಾತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು , ರೈತರು ಭಾಗಿಯಾಗಿದ್ದರು.

error: Content is protected !!