ಶಿವಮೊಗ್ಗ : ಜೋಗ ಅಭಿವೃದ್ದಿ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನೀಡಿದ ಹೇಳಿಕೆಗೆ ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದ್ದು, ಜೋಗ ಅಭಿವೃದ್ದಿ ಗೆ ಹೆಚ್ಚಿನ ಹಣ ತಂದಿದ್ದು ನಾವು , ಅವರಲ್ಲ ಎಂದು ದಾಖಲೆ ಸಮೇತ ಉತ್ತರಿಸಿದರು.
ನಗರದ ಪ್ರವಾಸಿ ಮಂದಿರಲ್ಲಿ ಇಂದು ತುರ್ತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಗ ಅಭಿವೃದ್ಧಿ ಬಿಎಸ್ ವೈ ಅವರ ಕನಸಾಗಿರಬಹುದು, ಅದನ್ನು ನನಸಾಗಿಸಿದ್ದು ನಾವು. ಬಿಜೆಪಿ ಅವಧಿಯಲ್ಲಿ 15 ಕೋಟಿ ರೂ. ಬಿಡುಗಡೆ ಆಗಿತ್ತು, ನಮ್ಮ ಅವಧಿಯಲ್ಲಿ 75 ಕೋಟಿ ರೂ.ಬಿಡುಗಡೆ ಆಗಿದೆ. ಒಟ್ಟು 140 ಕೋಟಿ ರೂ.ವೆಚ್ವದ ಕಾಮಗಾರಿ ನಡೆದಿದೆ ಎಂದರು.
ಮಿಸ್ಟರ್ ಬಸ್ ಸ್ಟ್ಯಾಂಡ್ ರಾಘುರವರೇ, ಕನಸು ಕಾಣೋದು ಮುಖ್ಯವಲ್ಲ. ನನಸು ಮಾಡುವಂತೆ ಕೆಲಸವಾಗಬೇಕು. ಕನ್ನಡಕ ಮೊದಲು 10 ಕೋಟಿ ಬಿಡುಗಡೆ ಮಾಡಿದ್ದು, ಆನಂತರ ನೀವು 5 ಕೋಟಿ ಬಿಡುಗಡೆ ಮಾಡಿದ್ದೀರಿ. ಉಳಿದ ಹಣವೆಲ್ಲಾ ನನಸು ಮಾಡಿದ್ದು ಗೋಪಾಲಕೃಷ್ಣ ಬೇಳೂರು. ಅಲ್ಲಿ ಕಮಲದ ಹೂವು ಮಾಡೋಕೆ ಹೊರಟಿದ್ದಿರಲ್ಲ, ಅದನ್ನ ಕಿತ್ತು ಬಿಸಾಕಿ ಹೊಸ ಕೆಲಸ 160 ಕೋಟಿದು ಆಗಿದೆ. ಜೋಗ ಅಭಿವೃದ್ಧಿಗೆ 90 ಕೋಟಿ ನಾನೇ ಕೊಡಿಸಿದ್ದು. ಸಿಂಗಾಪುರ ಪ್ರವಾಸದ ಮೂಲಕ ಜೋಗ ಅಭಿವೃದ್ಧಿಗೆ ಕಳೆ ಕಟ್ಟಲಾಗುವುದು.
ನಿಮ್ಮ ಸಿಗಂಧೂರು ಸೇತುವೆ ಬಿಂಬಿಸಿಕೊಂಡಿದ್ದೀರಿ, ನಾವು ನಮ್ಮ ಕೆಲಸ ಬಿಂಬಿಸಿಕೊಳ್ಳೋದು ಬೇಡವೇ ಬಸ್ ಸ್ಟ್ಯಾಂಡ್ ರಾಘುರವರೇ… ಜೋಗ ಡ್ಯಾಂ ಕೆಳಗೆ ಕೆಆರ್ಎಸ್ ಕನಸು ಕಂಡಿದ್ದು ನಾನು. ಕನ್ನಡಕದ ಬಗ್ಗೆ ಮಾತಾಡಿದವರೆಲ್ಲ ಮಣ್ಣು ಮುಕ್ಕಿದ್ದಾರೆ. ಕನ್ನಡಕ, ಬಟ್ಟೆ ಹಾಕುವುದೆಲ್ಲ ನನ್ನ ಹಕ್ಕು. ಶರಾವತಿ ಮುಳುಗಡೆಯಿಂದ ರೈತರು ವಿಷ ಕುಡಿಯೋ ಪರಿಸ್ಥಿತಿ ಬಗ್ಗೆ ಪಾರ್ಲಿಮೆಂಟಲ್ಲಿ ಮಾತಾಡಿದ್ರೆ ಮುಗೀತಾ ? ಹಿಂದುಳಿದ ವರ್ಗದವರೇ ಇರೋ ಜನ ಶರಾವತಿ ಮುಳುಗಡೆಯವರು. ಹಾಗಾಗಿ, ರಾಘವೇಂದ್ರರಿಗೆ ಆಸಕ್ತಿ ಇಲ್ಲ ಎಂದು ಟೀಕಿಸಿದರು.
ನಮ್ಮ ಸರ್ಕಾರ ಶರಾವತಿ ಸಂತ್ರಸ್ತರನ್ನು ಉಳಿಸಿಕೊಳ್ಳೋ ಪ್ರಯತ್ನ ಮಾಡುತ್ತಿದೆ. ರೈತರಿಗೆ ದ್ರೋಹ ಮಾಡುವ ಕೆಲಸ ರಾಘವೇಂದ್ರ, ಹಾಲಪ್ಪ, ಆರಗ ಜ್ಞಾನೇಂದ್ರ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪರನ್ನು ಅಭಿನಂದಿಸುತ್ತೇನೆ. ಮುಳುಗಡೆ ರೈತರ ಪರ ಕೆಲಸ ಮಾಡುತ್ತಿರೋ ಕ್ರೆಡಿಟ್ ರಾಜ್ಯ ಸರ್ಕಾರಕ್ಕೆ, ಮಧು ಬಂಗಾರಪ್ಪರಿಗೆ, ಬೇಳೂರಿಗೆ ಸಿಗಬೇಕು. ಏಳು ವರ್ಷ ಮಾತಾಡದ ಸಂಸದರು ನನಗೆ ಪಾಠ ಹೇಳುವ ಅವಶ್ಯಕತೆ ಇಲ್ಲ ಎಂದರು.
ಡ್ಯೂಪ್ಲಿಕೇಟ್ ಸಹಿ ಮಾಡಿ ಯಡಿಯೂರಪ್ಪರಿಗೆ ಜೈಲಿಗೆ ಕಳಿಸಿದ್ದು ಅಪ್ಪ ಮಕ್ಕಳು. ಮುಸ್ಲಿಂ, ಕ್ರಿಶ್ಚಿಯನ್ನರು ಏನೇ ಮಾಡಿದ್ರೂ ಬಿಜೆಪಿಯವರಿಗೆ ದೇಶ ದ್ರೋಹಿಗಳೇ. ಕಾಲೇಜಿನ ಜಾಗ ಫಾರೆಸ್ಟ್ ಆಗಿದ್ದು, ಡೀ ನೋಟಿಫೈ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಸಾಯಿ ಗಾರ್ಮೆಂಟ್ಸ್ ವಿಷಯದಲ್ಲೂ ಅಪ್ಪ-ಮಕ್ಕಳು ಸೂಟ್ ಕೇಸ್ ತಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರು ನಿಮ್ಮ ಮಗನನ್ನೇ ಮುಗಿಸಲು ಹೊರಟಿದ್ದಾರೆ. ಯಡಿಯೂರಪ್ಪ ಕಾಂಗ್ರೆಸ್ಸನ್ನು ಮುಗಿಸುವ ಮಾತನ್ನು ಈ ವಯಸ್ಸಲ್ಲಿ ಆಡಿದ್ದಾರೆ. ನಮ್ಮ ಪಕ್ಷ ಮುಗಿಸಲು ನಿಮ್ಮಿಂದ ಸಾಧ್ಯವೇ ಇಲ್ಲ. ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಮಾಡಿದ್ರಿ ಈಗ ಕಾಂಗ್ರೆಸ್ ಸರ್ಕಾರ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ. ಶಾಹಿ ಗಾರ್ಮೆಂಟ್ಸ್ ವಿರುದ್ಧ ಯಾವ ಕಾರಣಕ್ಕೂ ಹೋರಾಟ ನಿಲ್ಲಿಸೋಲ್ಲ. ಆರ್.ಎಂ. ಮಂಜುನಾಥ ಗೌಡರ ವಿರುದ್ಧ ಪಿತೂರಿ ನಡೆದಿದೆ. ಬಿಜೆಪಿ ಪಿತೂರಿ ಇದು ಎಂದರು.
